ಕಳಚುರಿ ಶಾಸನಗಳು

 ಕಳಚುರಿಗಳ ಶಿಲಾ ಮತ್ತು ತಾಮ್ರಶಾಸನಗಳು ಇಂದಿನ ಮಧ್ಯಪ್ರದೇಶ, ಮಹಾರಾಷ್ಟ್ರ, ಮೈಸೂರು ರಾಜ್ಯಗಳ ಅನೇಕ ಕಡೆಗಳಲ್ಲೂ ಗುಜರಾತ್ ಮತ್ತು ಉತ್ತರಪ್ರದೇಶಗಳ ಕೆಲವೆಡೆಗಳಲ್ಲೂ ಸಿಕ್ಕಿವೆ. ಇವುಗಳಲ್ಲಿ ಶಿಲಾಶಾಸನಗಳೇ ಅಧಿಕ.

ಕಲ್ಯಾಣದ ಕಳಚುರಿಗಳನ್ನುಳಿದು ಇತರ ಕಳಚುರಿಗಳ ಹೆಚ್ಚಿನ ಶಾಸನಗಳು ಅವರದೇ ಆದ ಕಳಚುರಿ-ಚೇದಿಸಂವತ್ ಶಕೆಯನ್ನನುಸರಿಸುತ್ತವೆ. ಇದು ಆಭೀರ, ತ್ರೈಕೂಟಕ, ಗೂರ್ಜರ ಮತ್ತು ಸೇಂದ್ರಕ ಅರಸರ ಶಾಸನಗಳಲ್ಲೂ ಉಂಟು. ಆಭೀರವಂಶದ ಈಶ್ವರಸೇನ 248-249ರಲ್ಲಿ ಈ ಶಕೆಯನ್ನಾರಂಭಿಸಿದನೆಂದು ವಿದ್ವಾಂಸರ ಅಭಿಪ್ರಾಯ. ಇದು ಕಳಚುರಿಗಳ ಶಾಸನಗಳಲ್ಲಿ ಅಧಿಕವಾಗಿ ಕಂಡುಬರುವುದರಿಂದಲೂ ಇವರ ರಾಜ್ಯ ಚೇದಿಮಂಡಲದಲ್ಲಿ (ಮಧ್ಯಭಾರತ) ಬಹುಕಾಲದ ವರೆಗೆ ಹಬ್ಬಿದ್ದುದರಿಂದಲೂ ಕಳಚುರಿ ಚೇದಿ ಸಂವತ್ತೆಂದೇ ಪ್ರಸಿದ್ಧವಾಗಿದೆ.

 ಕಳಚುರಿಗಳ ಶಾಸನಗಳು ಆರಂಭದಲ್ಲಿ ದಕ್ಷಿಣಭಾರತದ ಪಶ್ಚಿಮ ಭಾಗದಲ್ಲಿ ಆ ಕಾಲಕ್ಕೆ ಪ್ರಚಲಿತವಿದ್ದ ಬ್ರಾಹ್ಮೀ ಅಕ್ಷರಗಳಲ್ಲಿ, ಅನಂತರ ಸಿದ್ಧಮಾತೃಕಾ (ಇದಕ್ಕೆ ಪ್ರಾಗ್-ನಾಗರೀ; ಪ್ರೋಟೋ-ನಾಗರೀ ಎಂಬ ಅನ್ವರ್ಥನಾಮವೂ ಇದೆ) ಹಾಗೂ ನಾಗರೀ ಲಿಪಿಗಳಲ್ಲಿ ಇರುತ್ತವೆ. ಅವುಗಳ ಭಾಷೆ ಸಂಸ್ಕøತ. ಇದು ಒಮ್ಮೊಮ್ಮೆ ಪ್ರಾಕೃತ ಅಥವಾ ಪ್ರಾದೇಶಿಕ ಭಾಷೆಗಳಿಂದ ಪ್ರಭಾವಿತವಾಗಿದ್ದುದುಂಟು. ಶಾಸನಗಳು ಗದ್ಯ, ಪದ್ಯ ಅಥವಾ ಚಂಪೂರೂಪದಲ್ಲಿವೆ. ಶಾಸನಗಳ ಭಾಷೆ ಮೊದಲು ಸರಳವಾಗಿದ್ದು, ಕ್ರಮೇಣ ಪ್ರೌಢವೂ ಆಲಂಕಾರಿಕವೂ ಆಗಿದೆ. ಅನಂತರದ ಹೆಚ್ಚಿನ ಶಾಸನಗಳು ಕನ್ನಡ ಲಿಪಿಯಲ್ಲಿದ್ದು, ಅವುಗಳ ಭಾಷೆ ಕನ್ನಡ, ಸಂಸ್ಕøತ ಅಥವಾ ಅವೆರಡರ ಮಿಶ್ರಣವಾಗಿದೆ. ಕೆಲ ಶಾಸನಗಳು ಉತ್ತಮ ಕಾವ್ಯಕ್ಕೆ ಉದಾಹರಣೆಗಳಂತಿವೆ.

 ಶಾಸನಗಳು ಸಿದ್ಧಂ, ಸ್ವಸ್ತಿ ಮೊದಲಾದ ಮಂಗಳವಾಚಕ ಶಬ್ದಗಳಿಂದ, ದೇವತಾಸ್ತುತಿಗಳಿಂದ ಪ್ರಾರಂಭವಾಗಿ, ಅರಸರ ಮತ್ತು ಸಾಮಂತರ ಪ್ರಶಸ್ತಿ, ವಂಶಾವಳಿ ಮೊದಲಾದವುಗಳನ್ನಿತ್ತು, ತಮ್ಮ ಮುಖ್ಯ ಉದ್ದೇಶವನ್ನು ತಿಳಿಸುತ್ತವೆ. ಹೆಚ್ಚಿನವು ದಾನಶಾಸನಗಳು. ಕೆಲವಲ್ಲಿ ಅಂದಿನ ಸಮಾಜದ ರಾಜಕೀಯ ಪರಿಸ್ಥಿತಿಯ, ಧಾರ್ಮಿಕ ಆಗುಹೋಗುಗಳ ಮತ್ತು ವೀರರ ಬಗ್ಗೆ ವಿಶಿಷ್ಟ ರೀತಿಯ ಪ್ರಸ್ತಾಪವಿದೆ. ಕೊನೆಯಲ್ಲಿ ಶಾಸನದಲ್ಲಿ ನಮೂದಿಸಿದ ದಾನದ ರಕ್ಷಣೆಯ ಬಗ್ಗೆ ಉಪದೇಶಯುಕ್ತ ನುಡಿಗಳೂ ವ್ಯಾಸಪ್ರಣೀತ ಶ್ಲೋಕಗಳೂ ಇವೆ.

 ಹೆಚ್ಚಿನ ಶಾಸನಗಳ ತೇದಿಗಳು ಕಳಚುರಿ-ಚೇದಿ ಸಂವತ್ತಿನಲ್ಲಿದ್ದರೂ ಕೆಲವು ಗುಪ್ತ ಮತ್ತು ವಿಕ್ರಮ ಸಂವತ್ಸರಗಳಲ್ಲಿಯೂ ಇವೆ. ಕಳಚುರಿ-ಚೇದಿ ಹಾಗೂ ಗುಪ್ತ ಸಂವತ್ಸರಗಳನ್ನನುರಿಸುವ ಶಾಸನಗಳು, ಅನುಕ್ರಮವಾಗಿ, ಸಂವತ್ತಿನ ವರ್ಷ, ತಿಂಗಳು, ತಿಥಿ ಇವುಗಳನ್ನೀಯುತ್ತವೆ; ವಿಕ್ರಮ ಸಂವತ್ಸರವನ್ನನುಸರಿಸುವವು, ಅನುಕ್ರಮವಾಗಿ, ವಿಕ್ರಮಸಂವತ್ತಿನ ವರ್ಷ, ತಿಂಗಳು, ತಿಥಿ ಮತ್ತು ವಾರ ಈ ವಿವರಗಳನ್ನು ಕೊಡುತ್ತವೆ. ಇವುಗಳಲ್ಲಿ ಮಂಡಲಾಧಿಪತಿಗಳಿಗೆ ದಂಡನಾಯಕ, ಸಾಮಂತ ಮುಂತಾದ ಬಿರುದುಗಳನ್ನೂ ಸಾರ್ವಭೌಮರಿಗೆ ಚಕ್ರವರ್ತಿ, ಪರಮಭಟ್ಟಾರಕ, ಮಹಾರಾಜಾಧಿರಾಜ, ಪರಮೇಶ್ವರ ಮೊದಲಾದ ಬಿರುದುಗಳನ್ನೂ ಕೊಡಲಾಗಿರುತ್ತದೆ. ಕೆಲ ಅರಸರಿಗೆ ಮಾತಾಪಿತೃಪಾದಾನುಧ್ಯಾತ, ತ್ರಿಕಲಿಂಗಾಧಿಪತಿ, ನಿಜಭುಜೋಪಾರ್ಜಿತ-ಅಶ್ವಪತಿ-ಗಜಪತಿ-ನರಪತಿ-ರಾಜತ್ರಯಾಧಿಪತಿ ಮೊದಲಾದ ವಿಶಿಷ್ಟ ರೀತಿಯ ಬಿರುದುಗಳಿದ್ದದ್ದು ಕಂಡುಬರುತ್ತದೆ.

 ಕಲ್ಯಾಣದ ಕಳಚುರಿಗಳು ಪ್ರಾರಂಭದಲ್ಲಿ ಕಲ್ಯಾಣದ ಚಾಳುಕ್ಯರ ಮಾಂಡಲಿಕರಾಗಿದ್ದು, ತರುವಾಯ ಸಾರ್ವಭೌಮರಾಗಿ ರಾಜ್ಯವಾಳಿದರು. ಚಾಳುಕ್ಯರ ಸಾಮಂತರಾಗಿದ್ದಾಗ ಮಂಡಳೇಶ್ವರ, ಮಹಾಮಂಡಳೇಶ್ವರರೆಂದೂ ಸಾರ್ವಭೌಮರಾಗಿದ್ದಾಗ ಭುಜಬಳ ಚಕ್ರವರ್ತಿ ಸಮಸ್ತಭುವನಾಶ್ರಯ, ಶ್ರೀಪೃಥ್ವೀವಲ್ಲಭ, ಮಹಾರಾಜಾಧಿರಾಜ, ಕಳಚುರ್ಯಚಕ್ರವರ್ತಿಗಳೆಂದೂ ಇವರಿಗೆ ಬಿರುದುಗಳಿದ್ದುವು. ಕಾಳಾಂಜರ ಪುರವರೇಶ್ವರ ಎಂಬ ವಿಶಿಷ್ಟ ಬಿರುದು ಇವರ ಹಾಗೂ ಮಧ್ಯ ಭಾರತದ ಕಳಚುರಿಗಳ ಮನೆತನಗಳ ಸಂಬಂಧವನ್ನು ಸೂಚಿಸುತ್ತದೆ.          

 (ಎಂ.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ